ಕನ್ನಡ ಡಿಂಡಿಮ 2025
“ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಮಕ್ಕಳಿಗೆ ಪಾಲಕರೇ ಪರಿಚಯಿಸಬೇಕು” ಎಂದು ಪಾಲಕರಿಗೆ ಸಂಸ್ಕೃತಿಯ ಚಿಂತಕಿ, ಶ್ರೀ ಭಾರತೀ ವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಮತಿ ನಾಗವೇಣಿ ಭಾಗವತ್ ಅವರು ಕರೆ ನೀಡಿದರು.
ಶ್ರೀ ಭಾರತೀ ವಿದ್ಯಾಲಯದ ‘ಕನ್ನಡ ಡಿಂಡಿಮ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು “ಹತ್ತು ವರ್ಷದ ಒಳಗಿನ ಮಕ್ಕಳಿಗೆ ಕನಿಷ್ಠ, ಐದು ಭಾಷೆಗಳನ್ನು ಮಾತನಾಡಲು ಕಲಿಯುವ ಸಾಮರ್ಥ್ಯವಿರುತ್ತದೆ. ಹೀಗಿರುವಾಗ ಪಾಲಕರು ತಮ್ಮ ಮಕ್ಕಳೊಡನೆ ಕನ್ನಡದಲ್ಲಿ ಮಾತನಾಡಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅವರಿಗೆ ಪರಿಚಯಿಸಿ ಕಲಿಯಲು ಪ್ರೇರೇಪಿಸಬೇಕು” ಎಂದು ತಿಳಿಸಿದರು.
ಬನವಾಸಿಯ ಕದಂಬರಿಂದ ಹಿಡಿದು, ಮೈಸೂರು ಒಡೆಯರ ಕಾಲದವರೆಗಿನ ಕನ್ನಡ ಭಾಷೆ, ಸಂಸ್ಕೃತಿಯ ಇತಿಹಾಸಗಳನ್ನು ವಿವರಿಸುತ್ತಾ ಅವರು, ಬ್ರಿಟಿಷರು ವಿಶೇಷವಾಗಿ ಕರ್ನಾಟಕವನ್ನು ಒಡೆದದ್ದು, ಕರ್ನಾಟಕದ ಏಕೀಕರಣ, ನಾಡಧ್ವಜ ರೂಪಗೊಂಡ ಬಗೆಯನ್ನು ವಿವರಿಸಿದರು. ಮುಂದುವರಿದು ಮಾತನಾಡುತ್ತಾ ಅವರು “ಇಂದು ನಾವು ಆಂಗ್ಲ ಭಾಷೆಯನ್ನು ವ್ಯಾವಹಾರಿಕವಾಗಿ ಬಳಸಬೇಕು; ಆದರೆ ಕನ್ನಡ, ಸಂಸ್ಕೃತ, ತುಳು, ತೆಲುಗು, ತಮಿಳಿನಂತಹ ದೇಶೀಯ ಭಾಷೆಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸದೇ ಹೋದರೆ ಮುಂದೊಂದು ದಿನ ಅದು ದೊಡ್ಡ ಅಪರಾಧವಾಗುತ್ತದೆ ” ಎಂದು ಎಚ್ಚರಿಸಿದರು.
ಪ್ರಾಂಶುಪಾಲರಾದ ಶ್ರೀಮತಿ ವರ್ಷ ಎಸ್. ಎಸ್. ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಒಂದರಿಂದ ಐದನೇ ತರಗತಿಯವರೆಗಿನ ಮಕ್ಕಳಿಂದ ಕನ್ನಡ ನಾಡು – ನುಡಿ, ಸಂಸ್ಕೃತಿಯನ್ನು ಕಟ್ಟಿದವರ ಏಕಪಾತ್ರಾಭಿನಯ, ಚದ್ಮವೇಷ, ಹಾಸ್ಯ ನಾಟಕ ಹಾಗೂ ವಿಶೇಷವಾಗಿ ನಾಡಿನ ಜನಪದ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ವೈಭವು, ನೆರೆದ ಜನಸ್ತೋಮವನ್ನು ಸೂರೆಗೊಂಡಿತು.
ಕಾರ್ಯಕ್ರಮದಲ್ಲಿ ಪಾಲಕರಿಗೆ ವಿಶೇಷವಾಗಿ ಕನ್ನಡ ಪದ ಕಟ್ಟುವ ಬರವಣಿಗೆ ಮತ್ತು ಮೌಖಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸುಮಾರು 100ಕ್ಕೂ ಹೆಚ್ಚು ಪಾಲಕರು ಸ್ಪರ್ಧೆಗಳಲ್ಲಿ ಭಾಗವಹಿಸಿ, ಆನಂದಿಸಿ, ಬಹುಮಾನಗಳನ್ನು ಪಡೆದರು. ಶಾಲೆಯ ಕನ್ನಡ ಹಾಗೂ ನೃತ್ಯ ವಿಭಾಗದ ಸಹಯೋಗದಲ್ಲಿ ಮತ್ತು ಶಿಕ್ಷಕ ವೃಂದದ ಸಹಕಾರದಿಂದ ನಡೆದ ಕಾರ್ಯಕ್ರಮ ಪಾಲಕರ – ಪೋಷಕರ ಮೆಚ್ಚಿಗೆಗೆ ಪಾತ್ರವಾಯಿತು.






