ಮಾತಾ ಪಿತೃ ಪೂಜೆಯ ಮೂಲಕ ಕುಟುಂಬ ಮೌಲ್ಯಗಳ ಪಾಠ 2025
ಶನಿವಾರ, 9ನೇ ಆಗಸ್ಟ್ 2025, ನಮ್ಮ ಶ್ರೀಮಠದ ದಿವ್ಯ ಮಾರ್ಗದರ್ಶನದಲ್ಲಿ, ಶ್ರೀ ಭಾರತೀ ವಿದ್ಯಾಲಯದಲ್ಲಿ ಭಕ್ತಿಪೂರ್ವಕವಾಗಿ ಮಾತಾ ಪಿತೃ ಪೂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷೆ ಡಾ. ಶಾರದಾ ಜಯಗೋವಿಂದ್ ಮಾತನಾಡಿ – ತಾಯಿ-ತಂದೆಗಳನ್ನು ಗೌರವಿಸುವುದು ಧರ್ಮ, ಮತ, ಜಾತಿ ಮೀರಿ ಸರ್ವಮಾನವೀಯ ಸತ್ಯ ಎಂದು ತಿಳಿಸಿದರು. ಮಕ್ಕಳೂ ಪೋಷಕರೂ ಪರಸ್ಪರ ವಿನಮ್ರ ಸಂಭಾಷಣೆಯ ಅಭ್ಯಾಸ ಬೆಳೆಸಿಕೊಳ್ಳಬೇಕು. ಮಕ್ಕಳಲ್ಲಿ ದಯೆ, ಕರುಣೆ ಮತ್ತು ಸಂಸ್ಕಾರಗಳನ್ನು ಬೆಳೆಸುವುದು ಪೋಷಕರ ನಡೆ-ನುಡಿಗಳಲ್ಲಿಯೇ ಅಡಕವಾಗಿದೆ ಎಂದರು.ಕಾರ್ಯದರ್ಶಿ ಶ್ರೀಮತಿ ನಾಗವೇಣಿ ಭಾಗವತ್ ಅವರು – ಮಕ್ಕಳಿಗೆ ಶಿಕ್ಷಣದ ಜೊತೆಗೆ ಶಿಕ್ಷೆ ಕೂಡ ಅಗತ್ಯ, ಇದು ಅವರ ವ್ಯಕ್ತಿತ್ವವನ್ನು ರೂಪಿಸಲು ನೆರವಾಗುತ್ತದೆ ಎಂದು ಹೇಳಿದರು. ಪೋಷಕರು ತಮ್ಮ ತಾಯಿ-ತಂದೆಯನ್ನು ಗೌರವದಿಂದ ನಡೆಸಿಕೊಂಡರೆ, ಮಕ್ಕಳು ಅದರಿಂದಲೇ ಪೋಷಕರಿಗೆ ಗೌರವ ತೋರಿಸುವ ಗುಣವನ್ನು ಕಲಿಯುತ್ತಾರೆ ಎಂದು ಸಲಹೆ ನೀಡಿದರು.ಪ್ರಾಂಶುಪಾಲೆ ಶ್ರೀಮತಿ ವರ್ಷಾ ಅವರು ಮಕ್ಕಳನ್ನುದ್ದೇಶಿಸಿ – ನಿಮ್ಮ ಪ್ರತಿಯೊಂದು ನಡೆ-ನುಡಿ ಪೋಷಕರ ಮೇಲೆ ಪ್ರಭಾವ ಬೀರುತ್ತದೆ, ಆದ್ದರಿಂದ ಪ್ರತೀ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ ಸರಿಯಾದ ದಾರಿಯನ್ನು ಆಯ್ಕೆ ಮಾಡಿರಿ ಎಂದು ಹೇಳಿದರು. ಪೋಷಕರನ್ನುದ್ದೇಶಿಸಿ – ಈಗ ನಿಮ್ಮ ಮಕ್ಕಳ ಮೇಲೆ ಸಮಯ ಹೂಡಿದರೆ, ಭವಿಷ್ಯದಲ್ಲಿ ಅದರ ಉತ್ತಮ ಫಲ ಪಡೆಯುತ್ತೀರಿ ಎಂದು ಹಿತವಚನ ನೀಡಿದರು.ಕಾರ್ಯಕ್ರಮವನ್ನು 3 ಹಂತಗಳಲ್ಲಿ ನಡೆಸಲಾಗಿದ್ದು, ಸುಮಾರು 250 ದಂಪತಿಗಳು ತಮ್ಮ ಮಕ್ಕಳೊಂದಿಗೆ ಈ ಪವಿತ್ರ ಸಂಪ್ರದಾಯವನ್ನು ಸಾಕ್ಷಾತ್ಕರಿಸಿದರು. ಪ್ರತಿ ಹಂತದಲ್ಲಿಯೂ ಪೋಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು – ವಿಷಯ ಜ್ಞಾನದ ಜೊತೆಗೆ ಸಂಸ್ಕಾರ, ಸಂಪ್ರದಾಯಗಳ ಮಹತ್ವವನ್ನು ತಿಳಿಸುವಲ್ಲಿ ಶಾಲೆಯ ಪಾತ್ರವನ್ನು ಮೆಚ್ಚಿದರು.ಮುಖ್ಯೋಪಾಧ್ಯಾಯ ಶ್ರೀ ಸತ್ಯನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿ, ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು.“ಹರೆ ರಾಮ” ಘೋಷಗಳೊಂದಿಗೆ ಭಕ್ತಿ, ಕೃತಜ್ಞತೆ ಮತ್ತು ಸಂಸ್ಕಾರದ ವಾತಾವರಣ ಉಂಟಾಯಿತು. ಈ ದಿನದ ನೆನಪು ಎಲ್ಲರ ಹೃದಯಗಳಲ್ಲಿ ಅಚ್ಚಳಿಯದೆ ಉಳಿಯಿತು.



